ಕೋಟ್ಯಾಂತರ ಕ್ರೀಡಾಪ್ರೇಮಿಗಳ ಹೃದಯಗೆದ್ದ ಎಂಬಾಪೆಗೆ ಜನ್ಮದಿನದ ಸಂಭ್ರಮ – ಡಕಾಯಿತರ ಜಾಗದಲ್ಲಿ ಹುಟ್ಟಿ ಬೆಳೆದ ಹೂ ಇಡೀ ಜಗತ್ತಲ್ಲೇ ಕಂಪು ಬೀರಿದ್ದು ಹೇಗೆ?

ನ್ಯೂಸ್ ಆ್ಯರೋ : ಫಿಫಾ ಫುಟ್‌ಬಾಲ್ ವಿಶ್ವಕಪ್‌ನ ರೋಚಕ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಸೋತರೂ ಏಕಾಂಗಿಯಾಗಿ ವೀರೋಚಿತ ಹೋರಾಟ ನಡೆಸಿ, ಜಗತ್ತಿನ ಕೋಟ್ಯಂತರ ಕ್ರೀಡಾಪ್ರೇಮಿಗಳ ಮನಸ್ಸನ್ನು ಸೂರೆಗೊಂಡಿರುವ ಕಿಲಿಯನ್ ಎಂಬಾಪೆಗೆ ಇಂದು ಜನ್ಮದಿನದ ಸಂಭ್ರಮ.
ಕತಾರ್ನಲ್ಲಿ ಜರುಗಿದ ಫಿಫಾ ವಿಶ್ವಕಪ್ ಟೂರ್ನಿಗೆ ಭಾನುವಾರ ತೆರೆಬಿದ್ದಾಗಿದೆ. ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟ್‌ಔಟ್ ಮೂಲಕ ಫ್ರಾನ್ಸ್ ತಂಡವನ್ನು ಮಣಿಸಿದ ಅರ್ಜೆಂಟೀನ ತಂಡ ಪ್ರಶಸ್ತಿ ಗೆದ್ದಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಸ್ಟಾರ್ ಆಟಗಾರರಾದ ಮೆಸ್ಸಿ, ರೊನಾಲ್ಡೊ ಜೊತೆಗೆ ಕೇಳಿಬಂದ ಮತ್ತೊಂದು ಹೆಸರು ಕಿಲಿಯನ್ ಎಂಬಾಪೆ.
ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲುಗಳ ಮೂಲಕ ಫುಟ್‌ಬಾಲ್ ಪ್ರಿಯರ ಹೃದಯ ಗೆದ್ದ ಎಂಬಾಪೆ ಈ ಬಾರಿಯ ಫಿಫಾ ವರ್ಡ್‌ಕಪ್‌ನಲ್ಲಿ ಗೋಲ್ಡನ್ ಬೂಟ್ ಪಡೆದ ಫ್ರಾನ್ಸ್ ನ ಆಟಗಾರ. ಮೆಸ್ಸಿ, ರೊನಾಲ್ಡೊ ಯುಗ ಅಂತ್ಯವಾಗುತ್ತಿದ್ದ ವೇಳೆಯೇ ಕಾಲ್ಚೆಂಡಿನ ಜಗತ್ತನ್ನು ಆಳುವುದಕ್ಕಾಗಿಯೇ ಉದಯಿಸಿರುವ ಆಟಗಾರ ಫ್ರಾನ್ಸ್‌ನ ಕಿಲಿಯನ್ ಎಂಬಾಪೆ. ಫುಟ್‌ಬಾಲ್ ಜಗತ್ತಿನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಎಂಬಾಪೆಗೆ ಇಂದು ಹುಟ್ಟುಹಬ್ಬದ ಸಂಭ್ರಮ.
1998 ಡಿಸೆಂಬರ್ 20 ರಂದು ಫ್ರಾನ್ಸ್‌ನ ಪ್ಯಾರಿಸ್ನಲ್ಲಿ ಜನಿಸಿದ ಎಂಬಾಪೆ ಇಂದು 24ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಂದೆ ಮೂಲತಃ ಕ್ಯಾಮೆರೂನ್ ದೇಶದವರು. ಹೆಸರು ವಿಲ್‌ಫ್ರೆಡ್, ಫುಟ್‌ಬಾಲ್ ಆಟಗಾರ ಮಾತ್ರವಲ್ಲ ಕೋಚ್ ಕೂಡ. ತಾಯಿ ಫಾಯ್ಜಾ ಲಮಾರಿ ಅಲ್ಜೀರಿಯ ದೇಶದವರು, ಹ್ಯಾಂಡ್‌ಬಾಲ್ ಆಟಗಾರ್ತಿ. ಅಂದರೆ, ತಂದೆ ತಾಯಿ ಇಬ್ಬರೂ ಕ್ರೀಡಾ ಹಿನ್ನೆಲೆಯವರೇ. ಇಂತಹ ಪೋಷಕರಿಗೆ ಎಂಬಪೆ ಮಗನಾಗಿ 1998ರಲ್ಲಿ ಜನಿಸಿದರು. ವಿಶೇಷ ಎಂದರೆ ಅದೇ ವರ್ಷ ಫ್ರಾನ್ಸ್ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತ್ತು.
ಕ್ಯಾಥೊಲಿಕ್ ಸ್ಕೂಲ್‌ನಲ್ಲಿ ಓದುವಾಗಲೇ ಫುಟ್‌ಬಾಲ್‌ನ ದೀಕ್ಷೆ ಪಡೆದ ಅವರಿಗೆ ತಂದೆ ವಿಲ್‌ಫ್ರೆಡ್ ಅವರೇ ಮೊದಲ ಗುರು. 2017ರಲ್ಲಿ 18 ನೇ ವಯಸ್ಸಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಂಬಾಪೆ ಫ್ರಾನ್ಸ್‌ಗೆ ತಮ್ಮ ಚೊಚ್ಚಲ ಪ್ರವೇಶ ಪಡೆದರು. 2018 ಫಿಫಾ ವಿಶ್ವಕಪ್‌ನಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಫ್ರೆಂಚ್ ಆಟಗಾರ ಎಂಬ ಸಾಧನೆ ಮಾಡಿದರು.
ಫಿಫಾ ವಿಶ್ವಕಪ್‌ನಲ್ಲಿ ಅತ್ಯುತ್ತಮ ಯುವ ಆಟಗಾರ ಮತ್ತು ವರ್ಷದ ಫ್ರೆಂಚ್ ಆಟಗಾರ ಪ್ರಶಸ್ತಿಯನ್ನೂ ಗೆದ್ದರು. ಕಳೆದ ಬಾರಿ ಫ್ರಾನ್ಸ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು, ಸತತ ಎರಡನೇ ಬಾರಿಗೆ ವಿಶ್ವಕಪ್ ಕಿರೀಟ ತೊಡುವ ಅವಕಾಶದಿಂದ ಕೂದಲೆಳೆಯ ಅಂತರದಿಂದ ವಂಚಿತರಾದರು.
ಫುಟ್‌ಬಾಲ್ ಪ್ರೇಮಿಗಳ ಕಣ್ಮಣಿ: ಎಂಬಾಪೆ ಹುಟ್ಟಿದ್ದು ಕಾರ್ಮಿಕ ಕುಟುಂಬದಲ್ಲಿ. ಗಲಭೆ, ಕಲಹ, ದ್ವೇಷ, ಹಗೆತನಕ್ಕೆ ಮತ್ತೊಂದು ಹೆಸರು ಎನ್ನುವಂತಿದ್ದ, ಕಪ್ಪು ಜನಾಂಗದ ಬಡ ಕಾರ್ಮಿಕರು ಮಾತ್ರ ವಾಸವಿದ್ದ ಪ್ಯಾರಿಸ್‌ನ ಬಾಂಡಿ ಪ್ರದೇಶದಲ್ಲಿ ಬೆಳೆದ ಎಂಬಾಪೆ, ತನ್ನ ಆರನೇ ವಯಸ್ಗಿನಲ್ಲಿ ಫುಟ್‌ಬಾಲ್ ಆಡಲು ಶುರುಮಾಡಿದ್ದ. ಆತ ನಿತ್ಯ ಅಭ್ಯಾಸ ಮಾಡುತ್ತಿದ್ದ ಮನೆ ಬಳಿಯ ಮೈದಾನಕ್ಕೆ ‘ಅಪರಾಧ ಸಂತಾನೋತ್ಪತ್ತಿಯ ಮೈದಾನ’ ಎನ್ನುವ ಅಡ್ಡ ಹೆಸರಿತ್ತು. ಆ ಮೈದಾನದ ಕಪ್ಪು ಹೂವೊಂದು ಈಗ ವಿಶ್ವ ಫುಟ್‌ಬಾಲ್ ಪ್ರೇಮಿಗಳ ಕಣ್ಮಣಿಯಾಗಿದೆ.
ಬಾಲ್ಯದ ಕೋಚ್ ಎ.ಎಸ್ ಬಾಂಡಿ ಅವರ ಬಳಿಕ ತರಬೇತಿ ಪಡೆದು, ಫ್ರೆಂಚ್ ಫುಟ್‌ಬಾಲ್ ಫೆಡರೇಶನ್ ನಡೆಸುವ ಕ್ಲಾರಿಫೌಂಟೈನ್ ಆಕಾಡೆಮಿ ಸೇರಿದ ಎಂಬಾಪೆ ಮತ್ತೆ ತಿರುಗಿ ನೋಡಿದ್ದೇ ಇಲ್ಲ. ಕಾಲಿನಲ್ಲಿ ಎಂಬಾಪೆ ಮಾಡುತ್ತಿದ್ದ ಮ್ಯಾಜಿಕ್‌ಗಳನ್ನು ಆಶ್ಚರ್ಯ ಚಕಿತರಾಗಿ ವೀಕ್ಷಿಸುತ್ತಿದ್ದ ಫುಟ್‌ಬಾಲ್ ಮಲ್ಲರು, ಆತನನ್ನು ತಮ್ಮ ಕ್ಲಬ್‌ಗೆ ಕರೆತರಲು ಉತ್ಸುಕರಾಗಿದ್ದರು.
ಮೊನಾಕೊದ ‘ಬಿ’ ಟೀಂನ ಸದಸ್ಯನಾಗಿ ಫುಟ್‌ಬಾಲ್ ವೃತ್ತಿ ಆರಂಭಿಸಿದ್ದ ಎಂಬಾಪೆ, ಕೇವಲ ಮೂರೇ ವಾರದಲ್ಲಿ ಮುಖ್ಯ ತಂಡದ ಸದಸ್ಯನಾಗಿ ಮೈದಾನಕ್ಕೆ ಇಳಿದಿದ್ದ. 16 ವಯಸ್ಸಿನ ಎಂಬಾಪೆ, ಆ ತಂಡದಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಎನ್ನುವ ಹಿರಿಮೆಗೆ ಪಾತ್ರವಾಗಿದ್ದ. ಆತ ಮೊನಾಕೊ ಕ್ಲಬ್ ಪರವಾಗಿ ಗಳಿಸಿರುವ ಮೊದಲ ಗೋಲು, ಅತ್ಯಂತ ಕಿರಿಯ ಆಟಗಾರನಿಂದ ದಾಖಲಾದ ಗೋಲು ಎಂದು ದಾಖಲೆ ಬರೆದಿದೆ. ಎಂಬಾಪೆ ಮೈದಾನದಲ್ಲಿ ಇದ್ದರೆ ದಾಖಲೆಗಳು ನಿರ್ಮಾಣವಾಗುತ್ತವೆ. ಪಂದ್ಯಕ್ಕೊಂದು ಹೊಸ ತಿರುವು ಸಿಗುತ್ತದೆ. ಆತನ ಪಾದಗಳಲ್ಲಿ ಅಡಗಿರುವ ಮಾಂತ್ರಿಕ ಶಕ್ತಿ, ಮುಂದೊಂದು ದಿನ ಆತನನ್ನು ಫುಟ್ಬಾಲ್ ದಿಗ್ಗಜರ ಸಾಲಿಗೆ ಸೇರಿಸಲಿದೆ.
ಈಗ ಎಂಬಪ್ಪೆ ದಂತಕಥೆಯಾಗಿದ್ದಾರೆ. ಹಾಗಂತ ಅವರಿಗೆ ಅಹಂಕಾರ ಬಂದಿಲ್ಲ, ಸಿನಿಕತನಗಳೂ ಅವರನ್ನು ಕಾಡಿಲ್ಲ. ಅದೇ ಎಂದಿನ ವಿನಯವಂತಿಕೆಯೇ ಅವರೊಂದಿಗಿದೆ. ತಾವು ಪ್ರತೀಪಂದ್ಯಕ್ಕೂ ಪಡೆಯುವ ಸಂಭಾವನೆಯಲ್ಲಿ ದೊಡ್ಡ ಮೊತ್ತವನ್ನು ದಿವ್ಯಾಂಗ ಮಕ್ಕಳಿಗಾಗಿ ಕ್ರೀಡಾಕೂಟ ನಡೆಸುವ ಸಂಘಟನೆಯೊಂದಕ್ಕೆ ನೀಡುತ್ತಾರೆ. ಬೀಗುವ ಹೊತ್ತಲ್ಲೂ, ಬಾಗಿಯೇ ಇದ್ದಾರೆ.