1. Home
  2. Sports
  3. News
  4. T20WC : ಕ್ರಿಕೆಟ್ ಜನಕರ ಎದುರು ಗೆದ್ದು ಬೀಗಿದ ಕ್ರಿಕೆಟ್ ಶಿಶು ಐರ್ಲೆಂಡ್ – ಮಳೆ ಕಾಡಿದ ಪಂದ್ಯದಲ್ಲಿ ಹೊರಬಿತ್ತು ಮತ್ತೊಂದು ಶಾಕಿಂಗ್ ಫಲಿತಾಂಶ

T20WC : ಕ್ರಿಕೆಟ್ ಜನಕರ ಎದುರು ಗೆದ್ದು ಬೀಗಿದ ಕ್ರಿಕೆಟ್ ಶಿಶು ಐರ್ಲೆಂಡ್ – ಮಳೆ ಕಾಡಿದ ಪಂದ್ಯದಲ್ಲಿ ಹೊರಬಿತ್ತು ಮತ್ತೊಂದು ಶಾಕಿಂಗ್ ಫಲಿತಾಂಶ

T20WC : ಕ್ರಿಕೆಟ್ ಜನಕರ ಎದುರು ಗೆದ್ದು ಬೀಗಿದ ಕ್ರಿಕೆಟ್ ಶಿಶು ಐರ್ಲೆಂಡ್ – ಮಳೆ ಕಾಡಿದ ಪಂದ್ಯದಲ್ಲಿ ಹೊರಬಿತ್ತು ಮತ್ತೊಂದು ಶಾಕಿಂಗ್ ಫಲಿತಾಂಶ
0

ನ್ಯೂಸ್ ಆ್ಯರೋ‌ : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರ ಬಿದ್ದಿದೆ.

2010ರ ಚಾಂಪಿಯನ್ ಕ್ರಿಕೆಟ್ ಜನಕ ರಾಷ್ಟ್ರ ಇಂಗ್ಲೆಂಡ್ ತಂಡವು, ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಆಘಾತಕಾರಿ ಸೋಲು ಕಂಡಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಪಂದ್ಯದಲ್ಲಿ ಮಳೆಯ ಕಾರಣದಿಂದ ಪಂದ್ಯ ಸ್ಥಗಿತಗೊಂಡು,ಬಲಾಢ್ಯ ಇಂಗ್ಲೆಂಡ್ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 5 ರನ್’ಗಳಿಂದ ಮಣಿಸಿದ ಐರ್ಲೆಂಡ್ ಅವಿಸ್ಮರಣೀಯ ಗೆಲುವು ತನ್ನದಾಗಿಸಿಕೊಂಡಿತು‌.

ಐರ್ಲೆಂಡ್‌ ಪಾಲಿಗೆ ಇದು ಬೃಹತ್‌ ಮತ್ತು ಐತಿಹಾಸಿಕ ಗೆಲುವು. ವಿಶೇಷವೆಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಸೂಪರ್ 12 ಹಂತದಲ್ಲಿ ಈ ದೇಶಕ್ಕೆ ಮೊದಲ ಗೆಲುವು ಇದು. ಕ್ರಿಕೆಟ್‌ ಜನಕರಿಗೆ ಕ್ರಿಕೆಟ್‌ ಶಿಶುಗಳು ಶಾಕ್‌ ನೀಡಿದ್ದಾರೆ. ಮಳೆಯಿಂದ ಅಡ್ಡಿಗೊಳಗಾದ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಐರ್ಲೆಂಡ್‌ ರೋಚಕ ಹಾಗೂ ಐತಿಹಾಸಿಕ ಜಯ ಗಳಿಸಿದೆ. ಮಳೆಯ ಕಾರಣದಿಂದ ಆಂಗ್ಲರಿಗೆ ಅನಿರೀಕ್ಷಿತವಾಗಿ ಎದುರಾದ ಸೋಲು ಅರಗಿಸಲಾಗದಂತಾಗಿದೆ. ಮತ್ತೊಂದೆಡೆ ಮಹತ್ವದ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸಾಧಿಸಿದ ಗೆಲುವು ಐರಿಶ್‌ ಕ್ರಿಕೆಟಿಗರಿಗೆ ತುಂಬಾ ಮಹತ್ವದ್ದಾಗಿದೆ.

ವಿಶ್ವಕಪ್‌ ಸೂಪರ್‌ 12 ಎ ಗುಂಪಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಐರ್ಲೆಂಡ್‌, 157 ರನ್‌ಗಳಿಗೆ ಆಲೌಟ್‌ ಆಯಿತು. ಈ ಮೂಲಕ ಇಂಗ್ಲೆಂಡ್‌ ತಂಡಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್‌ ನೀಡಿತು. ಗುರಿ ಬೆನ್ನಟ್ಟಲು ಬಂದ ಆಂಗ್ಲರು ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡು, ಐರಿಶ್‌ ಹುಡುಗರ ದಾಳಿ ಎದುರಿಸಲು ಪರದಾಡಿದರು. ಇದಕ್ಕೆ ಮಳೆ ಕೂಡಾ ಅಡ್ಡಿಪಡಿಸಿತು.

ಆರಂಭದಿಂದಲೇ ಸ್ಫೋಟಕ ದಾಂಡಿಗರ ವಿಕೆಟ್‌ ಪಡೆಯುವಲ್ಲಿ ಐರ್ಲೆಂಡ್‌ ಯಶಸ್ಸು ಪಡೆಯಿತು. 14.3 ಓವರ್‌ಗಳಲ್ಲಿ ತಂಡ ‌5 ವಿಕೆಟ್‌ ಕಳೆದುಕೊಂಡು 105 ರನ್‌ ಗಳಿಸಿದ್ದಾಗ ಮಳೆ ಕಾಟ ಕೊಟ್ಟಿತು. ಹೀಗಾಗಿ ಡಕ್‌ವರ್ತ್‌ ಲೂಯಿಸ್‌ ನಿಯಮದ ಪ್ರಕಾರ ಐರ್ಲೆಂಡ್‌ 5 ರನ್‌ಗಳಿಂದ ಗೆಲುವು ಸಾಧಿಸಿತು.

ಚೇಸಿಂಗ್‌ ವೇಳೆ ಇಂಗ್ಲೆಂಡ್ ತಂಡ ಬ್ಯಾಟ್‌ ಬೀಸಲು ಕಷ್ಟಪಟ್ಟಿತು. ತಂಡದ ಮೊತ್ತ ಮೂರು ಅಂಕಿಗಳನ್ನು ತಲುಪವಷ್ಟರಲ್ಲೇ ಬಳಗದ ಅರ್ಧದಷ್ಟು ಬ್ಯಾಟರ್‌ಗಳು ಪೆವಿಲಿಯನ್‌ ಸೇರಿಕೊಂಡಿದ್ದರು. ಅಲೆಕ್ಸ್ ಹೇಲ್ಸ್ ಒಂದಂಕಿ ಮೊತ್ತಕ್ಕೆ ಔಟಾದರೆ, ನಾಯಕ ಜಾಸ್ ಬಟ್ಲರ್ ಡಕೌಟ್‌ ಆದರು. ಬೆನ್ ಸ್ಟೋಕ್ಸ್ ಕೂಡಾ ಒಂದಂಕಿಗೆ ತೃಪ್ತಿ ಪಟ್ಟರು. ತಂಡದ ಮೊತ್ತ 29 ಆಗುವಷ್ಟರಲ್ಲಿ ಪ್ರಮುಖ 3 ವಿಕೆಟ್‌ ಬಿದ್ದಿತ್ತು.

ಡೇವಿಡ್ ಮಾಲನ್ ಮತ್ತು ಹ್ಯಾರಿ ಬ್ರೂಕ್ ತಂಡವನ್ನು ಮುನ್ನಡೆಸಲು ಯತ್ನಿಸಿದರು. ಆದರೆ, ಅವರಿಂದ ಇನ್ನಿಂಗ್ಸ್ ಮುಂದುವರಿಸಲು ಸಾಧ್ಯವಾಗಲಿಲ್ಲ. ಇವರು ಔಟಾದ ಬಳಿಕ ಪವರ್ ಹಿಟ್ಟರ್‌ಗಳಾದ ಮೊಯಿನ್ ಅಲಿ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್‌ ಕ್ರೀಸ್‌ಗೆ ಇಳಿದರು. ಇವರು ಆಡುತ್ತಿದ್ದಾಗಲೇ ಮಳೆ ಬಂದು ಇನ್ನಿಂಗ್ಸ್‌ ಮೊಟಕುಗೊಂಡಿತು. ಆ ಬಳಿಕ ಆಟ ಮರು ಆರಂಭ ಪಡೆಯಲಿಲ್ಲ.

ಡಕ್‌ವರ್ತ್‌ ಲೂಯಿಸ್‌ ನಿಯಮದ ಪ್ರಕಾರ ಒಟ್ಟು ಎದುರಿಸಿದ ಓವರ್ ಗಳಲ್ಲಿ ಇಂಗ್ಲೆಂಡ್‌ 110 ರನ್‌ ಗಳಿಸಬೇಕಿತ್ತು. ಅದಕ್ಕಿಂತ 5 ರನ್‌ ಕಡಿಮೆ ಇದ್ದಿದ್ದರಿಂದ ಐರ್ಲೆಂಡ್‌ ತಂಡವನ್ನು ವಿಜೇತ ಎಂದು ಘೋಷಿಸಲಾಯ್ತು.

ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಐರ್ಲೆಂಡ್ ಇನ್ನಿಂಗ್ಸ್‌ನ ಮೊದಲಾರ್ಧ ಅದ್ಭುತವಾಗಿತ್ತು. ಆದರೆ ಕೊನೆಯ ಐದು ಓವರ್‌ಗಳಲ್ಲಿ ತಂಡ ಏಕಾಏಕಿ ಕುಸಿದಿದ್ದರಿಂದ ಬೃಹತ್‌ ಮೊತ್ತ ದಾಖಲಾಗಲಿಲ್ಲ. 10 ಓವರ್‌ನ ಅಂತ್ಯಕ್ಕೆ 92/1 ರಲ್ಲಿದ್ದ ಐರ್ಲೆಂಡ್‌, ಕೊನೆಯ 40 ರನ್‌ಗಳ ಅಂತರದಲ್ಲಿ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ 157 ರನ್‌ಗಳಿಗೆ ಆಲೌಟ್ ಆಯಿತು.

ಇಂದು ಅಂತಿಮವಾಗಿ ಐರ್ಲೆಂಡ್ ಐದು ರನ್‌ಗಳಿಂದ ಜಯ ಸಾಧಿಸಿದೆ. ಇದು ಐರ್ಲೆಂಡ್‌ ಪಾಲಿಗೆ ಬೃಹತ್‌ ಮತ್ತು ಐತಿಹಾಸಿಕ ಗೆಲುವು. ವಿಶೇಷವೆಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಸೂಪರ್ 12 ಹಂತದಲ್ಲಿ ಈ ದೇಶಕ್ಕೆ ಮೊದಲ ಗೆಲುವು ಇದು. ಈ ಗೆಲುವು ಸುಲಭವಾಗಿ ತಂಡಕ್ಕೆ ಲಭಿಸಿಲ್ಲ. ಪಂದ್ಯದುದ್ದಕ್ಕೂ ತಂಡ ಅದ್ಭುತವಾಗಿ ಆಟವಾಡಿದೆ. ಬಲ್ಬಿರ್ನಿ, ಅಡೇರ್ ಮತ್ತು ಮೆಕಾರ್ಥಿ ಉತ್ತಮ ಕೊಡುಗೆ ನೀಡಿದ್ದಾರೆ. ಗೆಲುವು ಲಭಿಸುತ್ತಿದ್ದಂತೆಯೇ ಐರ್ಲೆಂಡ್‌ ಪಾಳಯದಲ್ಲಿ ಸಂಭ್ರಮ ಮನೆಮಾಡಿತು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..