Kane Williamson : ಕಿವೀಸ್ ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದ ಕೇನ್ – ದಿಢೀರ್ ನಿರ್ಧಾರಕ್ಕೆ ಕಾರಣವೇನು ಗೊತ್ತಾ…!?

ನ್ಯೂಸ್ ಆ್ಯರೋ : ಕಳೆದ ಬಾರಿಯ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕರಾಗಿದ್ದ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.
“ಈ ಮಾದರಿಯಲ್ಲಿ ತಂಡವನ್ನು ಮುನ್ನಡೆಸುವ ಸವಾಲುಗಳನ್ನು ಅನುಭವಿಸಿದ್ದೇನೆ. ನಾಯಕತ್ವದಿಂದ ಮೈದಾನದ ಒಳಗೆ ಮತ್ತು ಹೊರಗೆ ಕೆಲಸದ ಹೊರೆ ಹೆಚ್ಚಾಗುತ್ತದೆ. ನನ್ನ ವೃತ್ತಿಜೀವನದ ಈ ಹಂತದಲ್ಲಿ, ಈ ನಿರ್ಧಾರಕ್ಕೆ ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನ್ಯೂಜಿಲೆಂಡ್ ಕ್ರಿಕೆಟ್ (NZC) ನೊಂದಿಗೆ ಚರ್ಚಿಸಿದ ನಂತರ ಮುಂದಿನ ಎರಡು ವರ್ಷಗಳಲ್ಲಿ ಎರಡು ವಿಶ್ವಕಪ್‌ಗಳೊಂದಿಗೆ ಸೀಮಿತ ಓವರ್‌ಗಳ ಸ್ವರೂಪಗಳಲ್ಲಿ ನಾಯಕತ್ವದಲ್ಲಿ ಮುಂದುವರಿಯುವುದು ಉತ್ತಮ ಎಂದು ನಾವು ಭಾವಿಸಿದ್ದೇವೆ” ಎಂದು ಕೇನ್ ವಿಲಿಯಮ್ಸನ್ ಹೇಳಿಕೆ ನೀಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ನ ನಾಯಕತ್ವವು ನನಗೆ ನಂಬಲಾಗದ ವಿಶೇಷ ಗೌರವವಾಗಿದೆ ಎಂದು ವಿಲಿಯಮ್ಸನ್ ಹೇಳಿದ್ದಾರೆ. ವಿರಾಟ್ ಹಾಗೂ ಸ್ಟೀವ್ ಸ್ಮಿತ್ ಆಡಿದ 19 ವರ್ಷ ಒಳಗಿನವರ ವಿಶ್ವಕಪ್ ನಲ್ಲಿ ಕೇನ್ ಅವರು ನ್ಯೂಜಿಲೆಂಡ್ ತಂಡದ ನಾಯಕರಾಗಿದ್ದರು.
ವಿಲಿಯಮ್ಸನ್ ಅವರು ಟಿ20 ಮತ್ತು ಏಕದಿನ ಮಾದರಿಯಲ್ಲಿ ತಂಡವನ್ನು ಮುನ್ನಡೆಸಲಿದ್ದು, ಅವರ ಅಭಿಮಾನಿಗಳಿಗೆ ಕೊಂಚ ಮಟ್ಟಿಗಿನ ನಿರಾಸೆ ಕಡಿಮೆ ಮಾಡಿದೆ. ಮುಂದಿನ ವರ್ಷ ಅಂದರೆ 2023ರಲ್ಲಿ ಏಕದಿನ ವಿಶ್ವಕಪ್ ಕೂಡ ನಡೆಯಲಿದ್ದು, ವಿಲಿಯಮ್ಸನ್ ನಾಯಕರಾಗಿರಲಿದ್ದಾರೆ. ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಮೂರು ಮಾದರಿಗಳಲ್ಲಿ ಆಡುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.