T20 WC : ನೆದರ್ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾಗೆ ಸೋಲು, ಭಾರತ ಸೆಮೀಸ್ ಗೆ ತೇರ್ಗಡೆ : ಕ್ವಾರ್ಟರ್ ಫೈನಲ್ ಮಾನ್ಯತೆ ಪಡೆದ ಪಾಕ್ – ಬಾಂಗ್ಲಾ ಪಂದ್ಯ, ಗೆದ್ದವರು ಸೆಮೀಸ್ ಗೆ

ನ್ಯೂಸ್ ಆ್ಯರೋ : ಅಡಿಲೇಡ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12ರ ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲ್ಯಾಂಡ್ಸ್ ಅಚ್ಚರಿ ಗೆಲುವು ಸಾಧಿಸಿದೆ. ಇದೀಗ ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ತಂಡದ ಸೆಮಿಫೈನಲ್ ಹಾದಿ ದುರ್ಗಮವಾಗಿದೆ.

ಅಡಿಲೇಡ್ ಕ್ರಿಕೆಟ್ ಮೈದಾನದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ನೆದರ್ಲ್ಯಾಂಡ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು.
ನೆದರ್‌ಲೆಂಡ್ಸ್ ನೀಡಿದ್ದ 159 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೇ ಶಕ್ತವಾಗಿದೆ.

ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ನೆದರ್‌ಲೆಂಡ್ಸ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ತೆಂಬ ಬವುಮಾ 20 ಎಸೆತಗಳಲ್ಲಿ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ದಕ್ಷಿಣ ಆಫ್ರಿಕಾ ತಂಡವು 39 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಲೇ ರೂಸೌ ಹಾಗೂ ಏಯ್ಡನ್ ಮಾರ್ಕ್‌ರಮ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಆದರೆ ಈ ಇಬ್ಬರು ಬ್ಯಾಟರ್‌ಗಳು ತಮಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು.
ರಿಲೇ ರೂಸೌ 19 ಎಸೆತಗಳಲ್ಲಿ 2 ಬೌಂಡರಿ ಸಹಿತ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಏಯ್ಡನ್ ಮಾರ್ಕ್‌ರಮ್ 13 ಎಸೆತಗಳಲ್ಲಿ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಡೇವಿಡ್ ಮಿಲ್ಲರ್ ಕೂಡಾ 17 ರನ್ ಬಾರಿಸಿ ರಾಲ್ಫ್ ವ್ಯಾನ್ ಡೆರ್ ಮರ್ವ್ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾಗಿ ವಿಕೆಟ್ ಒಪ್ಪಿಸಿದರು. ಇನ್ನು ಹೆನ್ರಿಚ್ ಕ್ಲಾಸೆನ್ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಕೊನೆಯ 3 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 41 ರನ್‌ಗಳ ಅಗತ್ಯವಿತ್ತು. 18ನೇ ಓವರ್‌ನಲ್ಲಿ ಹೆನ್ರಿಚ್ ಕ್ಲಾಸೆನ್ ವಿಕೆಟ್ ಪತನದೊಂದಿಗೆ ದಕ್ಷಿಣ ಆಫ್ರಿಕಾ ತಂಡವು ಸೋಲಿನತ್ತ ಮುಖಮಾಡಿತು. ಕೊನೆಯ 2 ಓವರ್‌ಗಳಲ್ಲಿ 36 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು 10 ರನ್ ಗಳಿಸಿತು. ಹೀಗಾಗಿ ಕೊನೆಯ ಓವರ್‌ನಲ್ಲಿ ಹರಿಣಗಳ ಪಡೆ 26 ರನ್‌ಗಳ ಅಗತ್ಯವಿತ್ತು. ಆದರೆ ಕೊನೆಯ ಓವರ್‌ನಲ್ಲಿ ಹರಿಣಗಳ ಪಡೆ 12 ರನ್ ಗಳಿಸಲಷ್ಟೇ ಶಕ್ತವಾಯಿತು.
ದಕ್ಷಿಣ ಆಫ್ರಿಕಾವು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ 13 ರನ್‌ಗಳಿಂದ ಸೋತಿದ್ದರಿಂದ ಜಿಂಬಾಬ್ವೆ ವಿರುದ್ಧ ಆಡುವ ಮೊದಲೇ ಭಾರತ ತಂಡ ಸೆಮಿಫೈನಲ್‌ಗೆ ಅರ್ಹತೆ ಗಳಿಸಿತು.