ಸುಳ್ಯ : ಸ್ವಂತ ಅತ್ತೆ, ಪತ್ನಿಯಿಂದಲೇ ಬೆಳ್ಳಾರೆಯ ಯುವ ಉದ್ಯಮಿ ನವೀನ್ ಅಪಹರಣ…!? – ಮನೆಗೇ ನುಗ್ಗಿ ತಲವಾರ್ ತೋರಿಸಿ ಹಲ್ಲೆ : ದೂರು ನೀಡಿದರೂ ಪಡೆಯದ ಪೋಲಿಸರು..!!

ನ್ಯೂಸ್ ಆ್ಯರೋ : ಮುಂದಿನ ಚುನಾವಣೆಗೆ ಪುತ್ತೂರಿನ ವಿಧಾನಸಭಾ ಕ್ಷೇತ್ರಕ್ಕೆ ಉಮೇದುವಾರರಾಗಿರುವ ಕಾಂಗ್ರೆಸ್ ನ ಮಹಿಳಾ ನಾಯಕಿ ದಿವ್ಯಪ್ರಭಾ ಗೌಡ ಚಿಲ್ತಡ್ಕ ಮತ್ತು ಆಕೆಯ ಮಗಳು ಸ್ಪಂದನಾ ಹಾಗೂ ಇನ್ನೂ ಹಲವರು ಸೇರಿಕೊಂಡು ನವೀನ್ ಮಲ್ಲಾರ ಎಂಬವರನ್ನು ಅಪಹರಿಸಿರುವ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ.
ಏನಿದು ಘಟನೆ?
ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಾವಿನಮೂಲೆ ಧರ್ಮಶ್ರೀ ನಿಲಯದಲ್ಲಿ ನವೀನ್ ಅವರು ವಾಸ್ತವ್ಯವಿದ್ದು, ಮನೆಯಲ್ಲಿ ನವೀನ್ ಅವರ ತಾಯಿ ಮತ್ತು ಅವರ ಅಣ್ಣನ ಮಗನ ಪತ್ನಿ ಇದ್ದ ವೇಳೆ ಇಂದು ಮಧ್ಯಾಹ್ನ 12:45 ರ ಸುಮಾರಿಗೆ ಈ ಮನೆಗೆ ಕದಂಬ ಆಂಬ್ಯುಲೆನ್ಸ್ ಬಂದಿದೆ.
ಅಂಬ್ಯುಲೆನ್ಸ್ ನಲ್ಲಿ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಅವರ ಪುತ್ರಿ ಸ್ಪಂದನಾ ಹಾಗೂ ಪರಶು ಎಂಬವರಲ್ಲದೇ ಇನ್ನೂ ಏಳೆಂಟು ಜನರ ತಂಡವಿತ್ತು ಎನ್ನಲಾಗಿದೆ.
ಅಂಬ್ಯುಲೆನ್ಸ್ ನಿಂದ ಇಳಿದು ಬಂದ ದುಷ್ಕರ್ಮಿಗಳು ಏಕಾಏಕಿ ನವೀನ್ ಅವರನ್ನು ಅಪಹರಿಸಲು ಯತ್ನಿಸಿದ್ದು, ತಡೆಯಲು ಹೋದ ನವೀನ್ ಅವರ ತಾಯಿ ಹಾಗೂ ಅತ್ತಿಗೆ ಮೇಲೆ ಹಲ್ಲೆಗ ನಡೆಸಿದ್ದು, ಕಾಲಿನಿಂದ ಒದ್ದು ನವೀನ್ ಅವರನ್ನು ಎಳೆದೊಯ್ದಿದ್ದಾರೆ ಎಂದು ನವೀನ್ ಅವರ ತಾಯಿ ಹೇಳಿಕೆ ನೀಡಿದ್ದಾರೆ.
ಅಲ್ಲದೇ ದುಷ್ಕರ್ಮಿಗಳ ಬಳಿ ತಲವಾರ್ ಕೂಡ ಇತ್ತು ಎನ್ನಲಾಗಿದ್ದು, ಈ ಬಗ್ಗೆ ಬೆಳ್ಳಾರೆ ಪೋಲಿಸ್ ಠಾಣೆಗೆ ದೂರು ನೀಡಲು ಹೋದ ಸಂದರ್ಭದಲ್ಲಿ ದೂರು ಪಡೆಯಲು ನಿರಾಕರಿಸಿದ್ದಾರೆ ಎಂದು ನವೀನ್ ಅವರ ತಾಯಿ ಆರೋಪಿಸಿದ್ದಾರೆ.
ಆದರೆ ಬೆಳ್ಳಾರೆ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಮ್ಮ ವರದಿಗಾರರಿಗೆ ನೀಡಿದ ಮಾಹಿತಿಯ ಪ್ರಕಾರ ಮಾದಕ ಪದಾರ್ಥಕ್ಕೆ ನವೀನ್ ಅವರು ಅಡಿಕ್ಟ್ ಆಗಿರುವ ಕಾರಣಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಅಷ್ಟೇ ಎಂದಿದ್ದಾರೆ.
ಸದ್ಯದ ಮಾಹಿತಿಯ ಪ್ರಕಾರ ಮಡಿಕೇರಿ ಬಳಿ ನವೀನ್ ಅವರನ್ನು ಅಪಹರಿಸಿರುವ ವಾಹನವನ್ನು ತಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ..