1. Home
  2. Tech
  3. News
  4. ಆ್ಯಪಲ್ ಕಂಪನಿಗೆ 20 ಮಿಲಿಯನ್ ಡಾಲರ್ ದಂಡ ವಿಧಿಸಿದ ನ್ಯಾಯಾಲಯ – ಕಾರಣವೇನು ಗೊತ್ತೇ…!?

ಆ್ಯಪಲ್ ಕಂಪನಿಗೆ 20 ಮಿಲಿಯನ್ ಡಾಲರ್ ದಂಡ ವಿಧಿಸಿದ ನ್ಯಾಯಾಲಯ – ಕಾರಣವೇನು ಗೊತ್ತೇ…!?

ಆ್ಯಪಲ್ ಕಂಪನಿಗೆ 20 ಮಿಲಿಯನ್ ಡಾಲರ್ ದಂಡ ವಿಧಿಸಿದ ನ್ಯಾಯಾಲಯ – ಕಾರಣವೇನು ಗೊತ್ತೇ…!?
0

ನ್ಯೂಸ್ ಆ್ಯರೋ : ಅಮೆರಿಕದ ಟೆಕ್ ದೈತ್ಯ ಆಪಲ್ ಇಂಕ್, ಪವರ್ ಅಡಾಪ್ಟರ್‌ಗಳಿಲ್ಲದೆ, ಚಾರ್ಜರ್ ಗಳಿಲ್ಲದೆ ಹೊಸ ಐಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ಹಲವು ವಿವಾದಗಳಿಗೆ ಗ್ರಾಸವಾಗಿದ್ದು, ಜಗತ್ತಿನಲ್ಲಿ ಈ ವಿಷಯ ಸುಮಾರು ಎರಡು ವರ್ಷಗಳಿಂದ ಬಹಳ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಬ್ರೆಜಿಲ್‌ ದೇಶವು ಚಾರ್ಜರ್‌ ಇಲ್ಲದೇ ಐಪೋನ್‌ ಮಾರಾಟವನ್ನು ನಿಷೇಧ ಮಾಡಿದ್ದು, ದೇಶಾದ್ಯಂತ ಐಫೋನ್ ಮಾರಾಟವನ್ನು ರದ್ದು ಮಾಡಿದೆ.

ಇದರ ಬೆನ್ನಲ್ಲೇ ಅಮೆರಿಕದ ಟೆಕ್ ದೈತ್ಯ ಆಪಲ್ ಇಂಕ್ ಪವರ್ ಅಡಾಪ್ಟರ್‌ಗಳಿಲ್ಲದೆ, ಚಾರ್ಜರ್ ಗಳಿಲ್ಲದೆ ಹೊಸ ಐಫೋನ್‌ಗಳನ್ನು(iPhone) ಮಾರಾಟ ಮಾಡುತ್ತಿದ್ದನ್ನು ಖಂಡಿಸಿ ಬ್ರೆಜಿಲ್ ನ್ಯಾಯಾಲಯ ಭಾರೀ ಮೊತ್ತದ ದಂಡ ವಿಧಿಸಿದ್ದು, ಆಪಲ್ ಸಂಸ್ಥೆ “ನಿಂದನೀಯ ಮತ್ತು ಕಾನೂನುಬಾಹಿರ” ಅಭ್ಯಾಸದಲ್ಲಿ ತೊಡಗಿದೆ ಎಂದು ಬ್ರೆಜಿಲಿಯನ್ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಸುಮಾರು 20 ಮಿಲಿಯನ್ ಡಾಲರ್‌ ಅಂದರೆ, ಭಾರತದ ರೂಪಾಯಿ ಮೌಲ್ಯದಲ್ಲಿ ಬರೋಬ್ಬರಿ 164 ಕೋಟಿ ರೂ. ದಂಡವನ್ನು ಆಪಲ್ ಸಂಸ್ಥೆ ತೆತ್ತಬೇಕಿದ್ದು, ಬ್ರೆಜಿಲಿಯನ್ ಗ್ರಾಹಕರ ಸಂಘ ನೀಡಿದ ದೂರನ್ನು ಪರಿಶೀಲಿಸಿ ಸಾವೊ ಪಾಲೊ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಈ ತೀರ್ಪು ಅನ್ನು ವಿಧಿಸಿದ್ದಾರೆ.

ಕಾನೂನು ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ತೀರ್ಪಿನಲ್ಲಿ, ನ್ಯಾಯಾಧೀಶರು ಐಫೋನ್‌ನ ಸಾಮಾನ್ಯ ಕಾರ್ಯನಿರ್ವಹಣೆಗೆ ಅಡಾಪ್ಟರ್
ಅತ್ಯಗತ್ಯ ಎಂದು ಹೇಳಿದ್ದಾರೆ. ತಯಾರಕರು ಇವುಗಳನ್ನು ಬಾಕ್ಸ್‌ಗಳಿಂದ ತೆಗೆದುಹಾಕುವ ಮೂಲಕ ಸ್ಥಳೀಯ ಗ್ರಾಹಕ ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹೆಚ್ಚಿನ ಗ್ರಾಹಕರು ವಿಶ್ವದ ಅತ್ಯಂತ ಬೆಲೆಬಾಳುವ ಕಂಪನಿಯಿಂದ ಪರಿಹಾರವನ್ನು ಪಡೆಯಲು ದೂರು ನೀಡಿದರೆ ಅಥವಾ ಮತ್ತೊಮ್ಮೆ ಬಿಡಿಭಾಗಗಳನ್ನು ಸೇರಿಸಲು ಒತ್ತಾಯಿಸಿದರೆ ಈ ಕ್ರಮವು ಹೆಚ್ಚು ದುಬಾರಿಯಾಗಬಹುದು ಎಂದು ಹೇಳಲಾಗಿದೆ.

ಆಪಲ್ ಕಂಪನಿಯು 2020ರಲ್ಲಿ ಐಫೋನ್ 12 ನೊಂದಿಗೆ ಪ್ರಾರಂಭವಾದ ಸ್ಮಾರ್ಟ್‌ಫೋನ್‌ಗಳೊಂದಿಗೆ ಚಾರ್ಜರ್ ಗಳು ಮತ್ತು ಹೆಡ್‌ಸೆಟ್ ಅನ್ನು ಸೇರಿಸುವುದನ್ನು ನಿಲ್ಲಿಸಿತು. ಇ-ತ್ಯಾಜ್ಯವನ್ನು ಕಡಿಮೆ ಮಾಡುವ ಪ್ರಯತ್ನವಾಗಿ ಇದನ್ನು ಮಾಡುತ್ತಿರುವುದಾಗಿ ಹೇಳಿತ್ತು. ಪರಿಸರಕ್ಕೆ ಇದು ಅಗತ್ಯವಾದ ಕ್ರಮವಾಗಿ ಎಂದೂ ಕಂಪನಿ ಹೇಳಿಕೊಂಡಿತ್ತು. ಆದರೆ. ನ್ಯಾಯಾಧೀಶರು ಈ ವಾದವನ್ನು ತಿರಸ್ಕರಿಸಿದ್ದಾರೆ.

ಆಪಲ್‌ನ ಉತ್ಪನ್ನದೊಂದಿಗೆ ಪ್ರತ್ಯೇಕವಾಗಿ ಹೊಂದಿಕೆಯಾಗದ ಮತ್ತು ಮೂರನೇ ವ್ಯಕ್ತಿಯ ಚಾರ್ಜರ್‌ಗಳೊಂದಿಗೆ ಬಳಸಬಹುದಾದ ಯುಎಸ್‌ಬಿ ಟೈಪ್-ಸಿ ಕೇಬಲ್ ಅನ್ನು ಬಳಸುತ್ತಿದೆ ಎಂಬ ಆಪಲ್‌ನ ಹಕ್ಕನ್ನು ನ್ಯಾಯಾಧೀಶರು ತಿರಸ್ಕರಿಸಿದರು. ಸಾಧನವು ವಿಭಿನ್ನ ವಿನ್ಯಾಸವನ್ನು ಹೊಂದಿದೆ ಮತ್ತು ಯಾವುದೇ ಯುಎಸ್‌ಬಿ ಪೋರ್ಟ್‌ನೊಂದಿಗೆ ಬಳಸಲಾಗುವುದಿಲ್ಲ ಎಂದು ಅವರು ಹೇಳಿದರು.

ಇತರ ದೇಶಗಳ ನ್ಯಾಯಾಲಯಗಳೂ ಕೂಡ ಈ ವಿಷಯವನ್ನು ಇದೇ ಆಧಾರದಲ್ಲಿ ನೋಡುತ್ತವೆಯೇ ಎನ್ನುವ ಕುತೂಹಲ ಈಗ ಎಲ್ಲರಲ್ಲಿ ಆರಂಭವಾಗಿದೆ. ಹಾಗೇನಾದರೂ ಆದಲ್ಲಿ ಆಪಲ್ ಕಂಪನಿಯು ಪುನಃ ಚಾರ್ಜರ್ ಗಳನ್ನು ಹೊಸ ಸ್ಮಾರ್ಟ್ ಫೋನ್ ಗಳ ಜೊತೆ ಸೇರಿಸುವ ಅನಿವಾರ್ಯತೆಗೆ ಸಿಲುಕಬಹುದು.

ಇನ್ನೂ ಈ ಹಿಂದೆಯೂ ಇಂತದೇ ಘಟನೆ ನಡೆದಿದ್ದು, ಆಪಲ್‌ ಕಂಪನಿ ಮೇಲೆ ಬ್ರೆಜಿಲ್‌ ಪ್ರಹಾರ ನಡೆಸುತ್ತಿರುವುದು ಇದೇ ಮೊದಲಲ್ಲ. ಐಫೋನ್ 12 ಸರಣಿ ಪೋನ್‌ ಕೂಡ ಚಾರ್ಜರ್‌ ಇಲ್ಲದೆ ಮಾರುಕಟ್ಟೆಗೆ ಬಂದಾಗ ಕೂಡ ಭಾರೀ ಮೊತ್ತದ ದಂಡವನ್ನು ವಿಧಿಸಿತ್ತು. ಬ್ರೆಜಿಲ್ ಆಪಲ್ ಕಂಪನಿಗೆ ಬರೋಬ್ಬರಿ 10 ಮಿಲಿಯನ್‌ ರೂ. ಗಳ ದಂಡವನ್ನು ವಿಧಿಸಿತ್ತು. ಆಗ ಕೊನೆಗೂ ಬ್ರೆಜಿಲ್‌ನ ನಿಷೇಧ ಆಜ್ಞೆಗೆ ಮಣಿದಿದ್ದ ಆಪಲ್‌ ಕಂಪನಿಯು ತನ್ನ ಐಪೋನ್‌ಗಳಿಗೆ ಚಾರ್ಜರ್‌ಗಳನ್ನು ಸೇರಿಸಿ, ಬ್ರೆಜಿಲ್‌ನ ಒಂದು ರಾಜ್ಯದಲ್ಲಿ ಮಾರಾಟ ಮಾಡಿತ್ತು. ಇಡೀ ದೇಶದಲ್ಲಿ ಆಪಲ್‌ ಕಂಪನಿಯ ಉತ್ಪನ್ನವಾದ ಐಪೋನ್‌ಗಳ ಜೊತೆ ಚಾರ್ಜರ್‌ ಅನ್ನು ಕಡ್ಡಾಯವಾಗಿ ನೀಡಲೇಬೇಕು ಎಂದು ಈ ಸಲವೂ ಬ್ರೆಜಿಲ್‌ ಆಪಲ್‌ನ ಐಪೋನ್‌ಗಳಿಗೆ ನಿಷೇಧ ಹೇರಿದೆ. ಹಾಗಿದ್ರೆ ಆಪಲ್‌ ಕಂಪನಿ ಮುಂದೆ ಏನು ಮಾಡುವುದು ಎಂಬುದೇ ಭಾರೀ ಕೂತುಹಲದ ಪ್ರಶ್ನೆ ಆಗಿದೆ.

2020 ರಲ್ಲಿ, ಆಪಲ್, ಹೆಚ್ಚು ‘ಪರಿಸರ ಪ್ರಜ್ಞೆ’ ಎನ್ನುವ ಕಾರಣದ ಅಡಿಯಲ್ಲಿ, ಇ-ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ತಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಚಾರ್ಜರ್ ಗಳು ಮತ್ತು ಇಯರ್‌ಫೋನ್‌ಗಳನ್ನು ಸೇರಿಸುವುದನ್ನು ನಿಲ್ಲಿಸಲು ನಿರ್ಧರಿಸಿತ್ತು. ಇದರಿಂದಾಗಿ ಕಂಪನಿಯು ಒಂದೇ ವರ್ಷದಲ್ಲಿ 6.5 ಬಿಲಿಯುನ್ ಯುಎಸ್ ಡಾಲರ್ ಮೊತ್ತವನ್ನು ಉಳಿಸಿದೆ ಎಂದು ಹೇಳಲಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..