ನಾನು ಟ್ವಿಟ್ಟರ್‌ನ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಯಬೇಕೆ? ಬೇಡವೇ? : ಟ್ವಿಟ್ಟರ್‌ನಲ್ಲಿ ಮತ ಕೇಳಿದ ಎಲಾನ್ ಮಸ್ಕ್ ಅಚ್ಚರಿ ಮೂಡಿಸಿದ ಟ್ವಿಟ್ಟರ್ ಮಾಲೀಕನ ನಡೆ

ನ್ಯೂಸ್ ಆ್ಯರೋ : ಟ್ವಿಟ್ಟರ್ ಖರೀದಿ ಬಳಿಕ ಒಂದಲ್ಲ ಒಂದು ಸುದ್ದಿಯಲ್ಲಿರುವ ಎಲಾನ್ ಮಸ್ಕ್ ಇದೀಗ ಇಂದು ಮಾಡಿರುವ ಟ್ವೀಟ್ ಎಲ್ಲರಿಗೂ ಅಚ್ಚರಿಯಾಗಿದೆ. ನಾನು ಟ್ವಿಟ್ಟರ್‌ನ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಯಬೇಕೆ? ಬೇಡವೇ? ಎಂಬುದನ್ನು ತಿಳಿಯಲು ನಿಮ್ಮ ಅಭಿಪ್ರಾಯವನ್ನು ಕೇಳುತ್ತಿದ್ದೇನೆ. ಈ ಮತಗಣನೆಯ ಫಲಿತಾಂಶಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದೀಗ ಎಲಾನ್ ಮಾಸ್ಕ್ ಅವರ ಹುದ್ದೆ ಟ್ವಿಟ್ಟರ್ ಸದಸ್ಯರ ಮೇಲೆ ನಿಂತಿದೆ. ಅವರು ಟ್ವೀಟ್ ಮಾಡಿರುವ ಕೆಲವೇ ನಿಮಿಷಗಳಲ್ಲಿ ಅಗಾಧ ಸಂಖ್ಯೆಯಲ್ಲಿ ಮತಗಳು ಬೀಳುತ್ತಿವೆ. ಸಾಕಷ್ಟು ಜನರು ಈ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ.
ಟ್ವಿಟ್ಟರ್‌ನ ನೂತನ ಮಾಲೀಕರಾದ ತಕ್ಷಣವೇ ಉನ್ನತ ಹುದ್ದೆಯಲ್ಲಿದ್ದ ಅನೇಕರನ್ನು ಮನೆಗೆ ಕಳುಹಿಸಿ ದೊಡ್ಡ ಸುದ್ದಿಯಾಗಿದ್ದರು. ಆನಂತರವೂ ಸಾಕಷ್ಟು ಬದಲಾವಣೆಗಳನ್ನು ತಂದಿದ್ದರು. ಇವರ ಕೆಲವೊಂದು ಕ್ರಮಗಳು ಸಾಕಷ್ಟು ವಿವಾದ, ಟೀಕೆಗಳಿಗೂ ಕಾರಣವಾಗಿತ್ತು.
ಭಾರತೀಯ ಕಾಲಮಾನ ಪ್ರಕಾರ ಇಂದು ಬೆಳಿಗ್ಗೆ 4.50ರ ಸುಮಾರಿಗೆ ಎಲಾನ್ ಮಸ್ಕ್ ಫೋಸ್ಟ್ ಮಾಡಿದ್ದಾರೆ. ತಕ್ಷಣವೇ 82 ಲಕ್ಷಕ್ಕೂ ಅಧಿಕ ಮತಗಳು ಬಿದ್ದಿದ್ದವು. ಮತ ಚಲಾಯಿಸಲು ಇನ್ನು ಎಂಟು ಗಂಟೆಗಳಷ್ಟೇ ಉಳಿದಿವೆ. ಸುಮಾರು ಹನ್ನೆರಡು ಗಂಟೆಯ ಮತಗಣನೆ ಇದಾಗಿದೆ.
ನಾವು ಪರಿಶೀಲಿಸುವ ವೇಳೆ ಒಟ್ಟು ಶೇಕಡ 56.8 ಮಂದಿ ಹೌದು ಎಂದು ಮತ ಚಲಾಯಿಸಿದ್ದಾರೆ. ಶೇಕಡ 43.2ರಷ್ಟು ಜನರು ಬೇಡ ಎಂದಿದ್ದಾರೆ. ಇನ್ನುಳಿದ ಎಂಟು ಗಂಟೆಗಳಲ್ಲಿ ಫಲಿತಾಂಶ ಏನಾಗುತ್ತದೆಯೋ ಎಂದು ಕಾದು ನೋಡಬೇಕಿದೆ.

ವಿಶೇಷವಾಗಿ ಅತ್ಯಧಿಕ ಜನರು ಎಲಾನ್ ಮಸ್ಕ್ ಅವರ ಟ್ವೀಟ್ ಅನ್ನು ಮರು ಟ್ವೀಟ್ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಎಂಟು ಗಂಟೆಯ ವೇಳೆಗೆ 131.2 ಸಾವಿರ ರಿಟ್ವೀಟ್ ಆಗಿತ್ತು.
ಎಲಾನ್ ಮಸ್ಕ್ ನೇತೃತ್ವದ ಟ್ವಿಟ್ಟರ್ ಕಂಪನಿಯು ಈಚೆಗೆ ಹೊಸ ಪ್ರೈವೆಸಿ ನಿಯಮಗಳನ್ನು ಪ್ರಕಟಿಸಿತ್ತು. ಇದರ ಪ್ರಕಾರ, ಯಾರೂ ಕೂಡ ಟ್ವಿಟ್ಟರ್ ಖಾತೆಯಲ್ಲಿ ಇನ್ನೊಬ್ಬರ ಲೈವ್ ಲೊಕೆಷನ್ (ಪ್ರದೇಶದ ಮ್ಯಾಪ್ ಮಾಹಿತಿ) ಹಂಚಿಕೊಳ್ಳುವಂತೆ ಇಲ್ಲ. ಈ ರೀತಿ ಲೈವ್ ಲೊಕೆಷನ್ ಡಾಕ್ಸಿಂಗ್ ಮಾಡಿದವರ ಖಾತೆ ಅಮಾನತುಗೊಳಿಸುವುದಾಗಿ ಹೇಳಿತ್ತು. ಎಲಾನ್ ಮಸ್ಕ್ ಅವರ ಖಾಸಗಿ ಜೆಟ್ ವಿಮಾನ ಹಾರಾಟದ ಕುರಿತು ಮಾಹಿತಿ ನೀಡಿದ್ದ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಲಾಗಿತ್ತು.