ಮೆಟಾದಿಂದ ಬೃಹತ್ ಸಂಖ್ಯೆಯ ಉದ್ಯೋಗ ಕಡಿತ – 11 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದ ಮಾರ್ಕ್ ಜುಕರ್‌ಬರ್ಗ್

ನ್ಯೂಸ್ ಆ್ಯರೋ : ಟ್ವಿಟರ್ ನಂತರ ದೈತ್ಯ ಸಾಮಾಜಿಕ ಮಾಧ್ಯಮ ಸಂಸ್ಥೆ ಫೇಸ್ ಬುಕ್ ಕೂಡ ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನ ಮೂಲ ಕಂಪನಿಯಾದ ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಇಂದಿನಿಂದ ಉದ್ಯೋಗಿಗಳ ವಜಾ ವನ್ನು ಪ್ರಾರಂಭಿಸಿದ್ದು, ಮೆಟಾ ಪ್ರಸ್ತುತ ಸುಮಾರು 87,000 ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು. ಆ ಪೈಕಿ ಶೇ.10ರಷ್ಟು ಉದ್ಯೋಗಿಗಳನ್ನು ಇಂದು ವಜಾ ಮಾಡಿದ್ದು, ಕಂಪನಿಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಕೆಲವು ತಪ್ಪು ನಿರ್ಧಾರಗಳಿಂದಾಗಿ ಕಂಪನಿಯು ಈ ಸ್ಥಿತಿ ತಲುಪಿದೆ, ಇದಕ್ಕೆ ನಾನೇ ಹೊಣೆ ಎಂದು ಹೇಳಿಕೊಂಡಿದ್ದಾರೆ.
ಹೌದು.. ಪ್ರಖ್ಯಾತ ಸಾಮಾಜಿಕ ಜಾಲತಾಣ ಫೇಸ್‌ಬುಕ್’ನ ಮಾತೃ ಸಂಸ್ಥೆ ಮೇಟಾ ಈ ವಾರದಲ್ಲೇ ಭಾರಿ ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದ್ದು, ಈ ಪ್ರಕ್ರಿಯೆಯ ಭಾಗವಾಗಿ ಇಂದು 11 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದೆ ಎಂದು ರಾಯಿಟರ್ಸ್ ವರದಿ ಮಾಡಿವೆ.
2004 ರಲ್ಲಿ ಸ್ಥಾಪನೆಗೊಂಡ ಫೇಸ್‌ಬುಕ್ ಸಂಸ್ಥೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾ ಮಾಡಿದ್ದು, ” ಈ ಕಠಿಣ ನಿರ್ಧಾರದಿಂದ ಪ್ರತಿಯೊಬ್ಬರು ಸಮಸ್ಯೆಗೆ ಸಿಲುಕಲಿದ್ದು, ಆ ಕುರಿತು ನನಗೆ ಬಹಳ ವಿಷಾದ ಇದೆ” ಎಂದು ಮೆಟಾ ಪ್ಲಾಟ್‌ಫಾರ್ಮ್ಸ್‌ನ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.
ಕೊರೊನಾ ಅವಧಿಯಲ್ಲಿ ಕಂಪನಿಯ ವ್ಯವಹಾರವು ಸಾಕಷ್ಟು ಹೆಚ್ಚಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ ವೇಳೆಗೆ, ಕಂಪನಿಯು ಒಂದು ವರ್ಷದಲ್ಲಿ ಶೇ.28ರಷ್ಟು ಹೊಸ ನೇಮಕಾತಿಗಳನ್ನು ಮಾಡಿದೆ. ಆದರೆ ಈ ವರ್ಷ, ಮೆಟಾ ಷೇರುಗಳು ಸುಮಾರು ಶೇ.73ರಷ್ಟು ಕುಸಿದಿದ್ದು, ಜಾಗತಿಕ ಆರ್ಥಿಕ ಮುಗ್ಗಟ್ಟಿನಿಂದ ಡಿಜಿಟಲ್ ಆ್ಯಡ್ ಮಾರುಕಟ್ಟೆ ಫೇಸ್‌ಬುಕ್, ಇನ್ಸ್‌ಟಾಗ್ರಾಮ್ ಇತ್ಯಾದಿ ಸೋಷಿಯಲ್ ಮೀಡಿಯಾಗಳ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಇದರೊಂದಿಗೆ ಫೇಸ್‌ಬುಕ್ ಗೆ ಟಿಕ್‌ಟಾಕ್ ಮತ್ತು ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಿಂದ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಫೇಸ್‌ಬುಕ್ ಯಿಂದ ಬಳಕೆದಾರರು ಟಿಕ್‌ಟಾಕ್ ಮತ್ತು ಯೂಟ್ಯೂಬ್‌ಗೆ ಬದಲಾಗುತ್ತಿದ್ದಾರೆ. ಇದರಿಂದ ಕಂಪನಿಯ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದ್ದು, ಈ ವರ್ಷ ಕಂಪನಿಯ ಷೇರುಗಳು ತೀವ್ರ ಕುಸಿತ ಕಂಡಿದೆ.
ಈ ಹಿನ್ನಲೆಯಲ್ಲಿ ಕಂಪನಿಯು ಈಗಾಗಲೇ ಹೊಸ ನೇಮಕಾತಿಯನ್ನು ನಿಲ್ಲಿಸಿದ್ದು, ಉದ್ಯೋಗಿಗಳ ಸಾಮೂಹಿಕ ವಜಾ ಮಾಡಿದೆ. ದಿ ವಾಲ್ ಸ್ಟ್ರೀಟ್ ಜರ್ನಲ್‌ನ ವರದಿಯ ಪ್ರಕಾರ, ಝುಕರ್‌ಬರ್ಗ್ ಈ ಬಗ್ಗೆ ಕಂಪನಿಯ ಕಾರ್ಯನಿರ್ವಾಹಕರೊಂದಿಗೆ ಮಾತನಾಡಿದ್ದು, ಈ ಸಂದರ್ಭದಲ್ಲಿ, ಕಂಪನಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕೆಲವು ನಿರ್ಧಾರಗಳು ಸರಿಯಾಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಕಂಪನಿಯಲ್ಲಿ ಸಾಮೂಹಿಕ ವಜಾದ ಪರಿಸ್ಥಿತಿಗೆ ನಾನೇ ಹೊಣೆ ಎಂದೂ ಹೇಳಿಕೊಂಡಿದ್ದಾರೆ.
ಇನ್ನೂ ಝುಕರ್‌ಬರ್ಗ್ ಅವರ ನಿವ್ವಳ ಮೌಲ್ಯ ಕುಸಿದಿದ್ದು, ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಝುಕರ್‌ಬರ್ಗ್ ಸುಮಾರು ಶೇ.16.8ರಷ್ಟು ಷೇರುಗಳನ್ನು ಹೊಂದಿದ್ದಾರೆ. ಫೇಸ್‌ಬುಕ್‌ನ ಶೇ. 97 ಕ್ಕಿಂತ ಹೆಚ್ಚು ಆದಾಯವು ಜಾಹೀರಾತುಗಳಿಂದ ಬರುತ್ತಿದ್ದು, ಕಂಪನಿಯ ಷೇರುಗಳ ಕುಸಿತದಿಂದಾಗಿ ಜುಕರ್‌ಬರ್ಗ್ ಅವರ ನಿವ್ವಳ ಮೌಲ್ಯವೂ ತೀವ್ರವಾಗಿ ಕುಸಿದಿದೆ. ಒಂದು ಕಾಲದಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಅವರು ಈಗ 28ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ನಿವ್ವಳ ಮೌಲ್ಯವು ಈ ವರ್ಷ $ 88.2 ಶತಕೋಟಿಯಿಂದ $ 37.2 ಶತಕೋಟಿಗೆ ಇಳಿಕೆಯಾಗಿದ್ದು, ಷೇರುಗಳ ಕುಸಿತದಿಂದ ಫೇಸ್‌ಬುಕ್‌ನ ಮಾರುಕಟ್ಟೆ ಕ್ಯಾಪ್ ಕೂಡ ತೀವ್ರವಾಗಿ ಕುಸಿದಿದೆ. ಈ ವರ್ಷ ಕಂಪನಿಯ ಮಾರುಕಟ್ಟೆ ಮೌಲ್ಯ 500 ಬಿಲಿಯನ್ ಡಾಲರ್‌ಗಳಷ್ಟು ಕುಸಿದಿದೆ.