ಅರಿವು ಶೈಕ್ಷಣಿಕ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ – ಅರ್ಜಿ ಸಲ್ಲಿಕೆ ಹೇಗೆ? ಕೊನೆ ದಿನ ಯಾವಾಗ? ಇಲ್ಲಿದೆ ಮಾಹಿತಿ…

ನ್ಯೂಸ್ ಆ್ಯರೋ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2022-23 ನೇ ಸಾಲಿನಲ್ಲಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈಗಾಗಲೇ ಅರ್ಜಿ ಸ್ವೀಕಾರ ಆರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿಇಟಿ / ನೀಟ್ ಮುಖಾಂತರ) ಎಂಬಿಬಿಎಸ್ / ಬಿಡಿಎಸ್ / ಆಯುಷ್ / ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ / ಬ್ಯಾಚುಲರ್ ಆಫ್ ಇಂಜಿನಿಯರಿಂಗ್ / ಬ್ಯಾಚುಲರ್ ಆಫ್ ಟೆಕ್ನಾಲಜಿ ಕೋರ್ಸ್‌ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಾಲವನ್ನು ನೀಡಲಾಗುತ್ತದೆ.
ಕರ್ನಾಟಕ ರಾಜ್ಯದ ಮುಸ್ಲಿಂ, ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರಿವು ಯೋಜನೆಯಡಿ ಶೈಕ್ಷಣಿಕ ಸಾಲವನ್ನು ಪಡೆಯಲು ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ.8 ಲಕ್ಷಗಳಿಗಿಂತ ಕಡಿಮೆ ಇರಬೇಕು. ವಿದ್ಯಾರ್ಥಿಯು ಪಡೆದ ಸಾಲವನ್ನು ಕೋರ್ಸ್ ಮುಗಿದ 1 ವರ್ಷದ ನಂತರ 48 ತಿಂಗಳ ಅವಧಿಯಲ್ಲಿ ಶೇಕಡ.2 ಬಡ್ಡಿದರದಲ್ಲಿ ಮರುಪಾವತಿ ಮಾಡಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣ ಪತ್ರ.
- ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣ ಪತ್ರ.
- ಆಧಾರ್ ಕಾರ್ಡ್ ಪ್ರತಿ
- ಸಿಇಟಿ ಪ್ರವೇಶ ಪತ್ರ
- ನೀಟ್ ಪ್ರವೇಶ ಪತ್ರ
- ಎಸ್‌ಎಸ್‌ಎಲ್‌ಸಿ / 10ನೇ ತರಗತಿಯ ಅಂಕಪಟ್ಟಿ.
- ಡಿಪ್ಲೊಮ / ಪಿಯುಸಿ ಅಂಕಪಟ್ಟಿ
- ನಾಲ್ಕು ಪಾಸ್ ಪೋರ್ಟ್ ಅಳತೆಯ ಫೋಟೋ
- ನೋಟರಿ ಮಾಡಿಸಿದ ಇಂಡಿಮ್ನಿಟ್ ಬಾಂಡ್.
ಈ ಎಲ್ಲಾ ದಾಖಲೆಗಳನ್ನು ನವೆಂಬರ್ 30ರೊಳಗೆ ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗಳಿಗೆ ಸಲ್ಲಿಸಲು ಸೂಚಿಸಲಾಗಿದೆ.