1. Home
  2. Tech
  3. News
  4. ಮಂಗಳನ ಅಂಗಳಕ್ಕೆ ಇಸ್ರೋ ಕಳುಹಿಸಿದ್ದ ಉಪಗ್ರಹದ ಬ್ಯಾಟರಿ ಖಾಲಿ – ಎಂಟು ವರ್ಷಗಳ ನಂತರ ವಿಜ್ಞಾನಿಗಳ ಸಂಪರ್ಕ ಕಳೆದುಕೊಂಡ ಕಕ್ಷೆಗಾಮಿ

ಮಂಗಳನ ಅಂಗಳಕ್ಕೆ ಇಸ್ರೋ ಕಳುಹಿಸಿದ್ದ ಉಪಗ್ರಹದ ಬ್ಯಾಟರಿ ಖಾಲಿ – ಎಂಟು ವರ್ಷಗಳ ನಂತರ ವಿಜ್ಞಾನಿಗಳ ಸಂಪರ್ಕ ಕಳೆದುಕೊಂಡ ಕಕ್ಷೆಗಾಮಿ

ಮಂಗಳನ ಅಂಗಳಕ್ಕೆ ಇಸ್ರೋ ಕಳುಹಿಸಿದ್ದ ಉಪಗ್ರಹದ ಬ್ಯಾಟರಿ ಖಾಲಿ – ಎಂಟು ವರ್ಷಗಳ ನಂತರ ವಿಜ್ಞಾನಿಗಳ ಸಂಪರ್ಕ ಕಳೆದುಕೊಂಡ  ಕಕ್ಷೆಗಾಮಿ
0

ನ್ಯೂಸ್ ಆ್ಯರೋ‌ : 8 ವರ್ಷಗಳ ಕಠಿಣ ಪರಿಶ್ರಮದ ನಂತರ ‘ಮಂಗಳಯಾನ’ ಕಕ್ಷೆಗಾಮಿ ತನ್ನ ಕಾರ್ಯವನ್ನು ನಿಲ್ಲಿಸಿದೆ. ಇದು ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣೆ ನಡೆಸಿ ಅದರ ಅಪರೂಪದ ಮಾಹಿತಿಯನ್ನು ಭೂಮಿಗೆ ರವಾನಿಸುತ್ತಿತ್ತು. ಇದೀಗ ಕಕ್ಷೆಗಾಮಿಯ ಬ್ಯಾಟರಿ ಬರಿದಾಗಿದ್ದು, ಅದು ಕಾರ್ಯನಿರ್ವಹಿಸಲು ಸಾದ್ಯವಾಗುತ್ತಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೂಲಗಳು ತಿಳಿಸಿವೆ.

“ಸದ್ಯ, ಇಂಧನ ಖಾಲಿಯಾಗಿದೆ. ಉಪಗ್ರಹದ ಬ್ಯಾಟರಿಯೂ ಖಾಲಿಯಾಗಿದೆ. ಹೀಗಾಗಿ ಅದರ ಸಂಪರ್ಕವು ಕೂಡ ಕಡಿತಗೊಂಡಿದೆ” ಎಂದು ಇಸ್ರೋ ಮೂಲಗಳು ತಿಳಿಸಿವೆ. ಆದ್ರೆ, ಈ ಬಗ್ಗೆ ಇಸ್ರೋ ಯಾವುದೇ ಮಾಹಿತಿ ನೀಡಿಲ್ಲ.

450 ಕೋಟಿ ರೂ. ವೆಚ್ಚದ ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ನವೆಂಬರ್ 5, 2013 ರಂದು PSLV-C25 ನಲ್ಲಿ ಉಡಾವಣೆ ಮಾಡಲಾಯಿತು ಮತ್ತು MOM ಬಾಹ್ಯಾಕಾಶ ನೌಕೆಯನ್ನು ಅದರ ಮೊದಲ ಪ್ರಯತ್ನದಲ್ಲಿ ಸೆಪ್ಟೆಂಬರ್ 24, 2014 ರಂದು ಯಶಸ್ವಿಯಾಗಿ ಮಂಗಳದ ಕಕ್ಷೆಗೆ ಸೇರಿಸಲಾಯಿತು. ಮೊದಲ ಪ್ರಯತ್ನದಲ್ಲೇ ಇಸ್ರೋ ಮಂಗಳ ಗ್ರಹದ ಕಕ್ಷೆಗೆ ಕಕ್ಷೆಗಾಮಿಯನ್ನು ಯಶಸ್ವಿಯಾಗಿ ಸೇರಿಸಿತ್ತು.

ಸದ್ಯ ಉಪಗ್ರಹದಲ್ಲಿ ಇಂಧನ ಹಾಗೂ ಬ್ಯಾಟರಿ ಖಾಲಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮೂಲಗಳು ತಿಳಿಸಿವೆ ಎನ್ನಲಾಗಿದೆ. ಆದರೆ ಇಸ್ರೋದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಮಾರ್ಸ್ ಆರ್ಬಿಟರ್ ಕ್ರಾಫ್ಟ್ ಸುಮಾರು ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದು, ಇದನ್ನು ಕೇವಲ ಆರು ತಿಂಗಳ ಅವಧಿಗೆ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿತ್ತು. ಆದ್ರೆ, ಇದು ಅವಧಿಗೂ ಮೀರಿ ಕಾರ್ಯನಿರ್ವಹಿಸಿದ್ದು, ಇದು ತನ್ನ ಕೆಲಸವನ್ನು ಸಂಪೂರ್ಣವಾಗಿ ಹಾಗೂ ಸಮರ್ಥವಾಗಿ ಮಾಡುವ ಮೂಲಕ ಗಮನಾರ್ಹ ವೈಜ್ಞಾನಿಕ ಫಲಿತಾಂಶಗಳನ್ನು ನೀಡಿದೆ.

ಮಂಗಳ ಗ್ರಹದಲ್ಲಿನ ವಾತಾವರಣ, ಅದರ ಮೇಲ್ಮೈ ಲಕ್ಷಣ, ಅಲ್ಲಿ ಇರಬಹುದಾದ ಸೂಕ್ಷ್ಮ ಜೀವ ಕಣಗಳು, ಜೀವಿಗಳ ಹುಟ್ಟಿಗೆ ಕಾರಣವಾಗುವ ಮಿಥೇನ್ ಅನಿಲ ಇದೆಯೇ ಎಂಬುದನ್ನು ಪತ್ತೆ ಹಚ್ಚುವುದು ಮಾರ್ಸ್ ಆರ್ಬಿಟ್ ಮಿಷನ್ ಯೋಜನೆಯ ಮೂಲ ಉದ್ದೇಶವಾಗಿತ್ತು. ಈಗಾಗಲೇ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದು, ಇಸ್ರೋ ಕೈಗೊಂಡಿದ್ದ ನಂತರ ಗ್ರಹಯಾನ ಯೋಜನೆಗಳಲ್ಲಿ ಮಂಗಳಯಾನ ಅತ್ಯಂತ ಕಡಿಮೆ ವೆಚ್ಚದ ಯೋಜನೆಯಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..