
ನ್ಯೂಸ್ ಆ್ಯರೋ : ರಾಜ್ಯದಲ್ಲಿ ‘ಭಾರತ್ ಜೋಡೋ ಯಾತ್ರೆ’ ಮುನ್ನಡೆಸುತ್ತಿರುವ ರಾಹುಲ್ ಗಾಂಧಿಯವರನ್ನು ಹಲವಾರು ಕನ್ನಡ ಪರ ಸಂಘಟನೆಗಳು ಗುರಿಯಾಗಿಸಿವೆ. ಅದಕ್ಕೆ ಕಾರಣ ‘ನಾಡ ಧ್ವಜ’ದ ಮೇಲೆ ರಾಹುಲ್ ಫೋಟೋ ಬಳಸಿರುವುದು..!!
ನಾಡ ಧ್ವಜ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲವಾದ್ದರಿಂದ ಅದನ್ನು ರಾಜಕೀಯ ಜಾಥಾ, ಸಂಘಟನೆಗಳಿಗೆ ಬಳಸುವುದು ಸಲ್ಲದು ಎಂದು ಕರ್ನಾಟಕ ನವನಿರ್ಮಾಣ ಸೇನೆಯಂತಹ ಕನ್ನಡ ಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಅಷ್ಟೇ ಅಲ್ಲದೆ ‘ಕರ್ನಾಟಕ ಧ್ವಜ’ದಲ್ಲಿ ರಾಹುಲ್ ಗಾಂಧಿ ಚಿತ್ರವನ್ನು ಬಳಸದಂತೆ ಕನ್ನಡ ಪರ ಸಂಘಟನೆಗಳು ಕಾಂಗ್ರೆಸ್‌ಗೆ ಖಡಕ್ ಎಚ್ಚರಿಕೆ ನೀಡಿವೆ.
ಮೈಸೂರಿನಲ್ಲಿ ಕಾಂಗ್ರೆಸ್ ವತಿಯಿಂದ ಭಾನುವಾರದಂದು ನಡೆದ ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ‘ಕರ್ನಾಟಕ ಧ್ವಜ’ಗಳನ್ನು ಹಾರಿಸಲಾಗಿದೆ. ಈ ಬಾವುಟಗಳ ಮೇಲೆ ರಾಹುಲ್ ಗಾಂಧಿಯವರ ಚಿತ್ರಗಳನ್ನು ಮುದ್ರಿಸಲಾಗಿತ್ತು. ಧ್ವಜದ ಮೇಲೆ ರಾಹುಲ್ ಗಾಂಧಿ ಚಿತ್ರವನ್ನು ಮುದ್ರಿಸಿದ್ದಕ್ಕಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ. ಅನೌಪಚಾರಿಕವಾಗಿ ನಾಡ ಬಾವುಟ ಎಂದು ಹೇಳಲಾಗುವ ಧ್ವಜದಲ್ಲಿ ಒಂದು ಕೆಂಪು ಮತ್ತು ಹಳದಿ ಬಣ್ಣದ ಪಟ್ಟಿಗಳಿವೆ. ಇದು ಕನ್ನಡ ಮತ್ತು ಕರ್ನಾಟಕ ಎರಡನ್ನೂ ಸಂಕೇತಿಸುತ್ತದೆ ಎನ್ನಲಾಗುತ್ತದೆ.

ರಾಜ್ಯ ಕಂದಾಯ ಸಚಿವ ಆರ್ ಅಶೋಕ್ ಈ ಕುರಿತು ಮಾಧ್ಯಮ ಹೇಳಿಕೆ ನೀಡಿದ್ದು, “ಕನ್ನಡ ಧ್ವಜದ ಮೇಲಿನ ಫೋಟೋವನ್ನು ನಾನು ಖಂಡಿಸುತ್ತೇನೆ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಕರ್ನಾಟಕದ ಧ್ವಜವನ್ನು ಬದಲಾಯಿಸಿದ್ದರು, ಆ ಸಮಯದಲ್ಲಿ ಎಲ್ಲಾ ಕನ್ನಡಿಗರು ಪ್ರತಿಭಟಿಸಿದ್ದರು, ನಂತರ ತಮ್ಮ ನಿರ್ಣಯವನ್ನು ಬದಲಾಯಿಸಿದ್ದರು. ಇದೀಗ, ಧ್ವಜದ ಮೇಲೆ ರಾಹುಲ್ ಗಾಂಧಿಯವರ ಚಿತ್ರ ಬಳಸಿರುವುದು ಕಾಂಗ್ರೆಸ್‌ಗೆ ನಾಚಿಕೆಗೇಡಿನ ಸಂಗತಿ” ಎಂದಿದ್ದಾರೆ.
ಈ ವಿವಾದಕ್ಕೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ ಕೂಡ ಪ್ರತಿಕ್ರಿಯಿಸಿದ್ದು, ಮಾಧ್ಯಮಗಳ ವರದಿ ಆಧರಿಸಿ, “ನಾವು ಕ್ಷಮೆಯಾಚಿಸುವುದಿಲ್ಲ. ಕನ್ನಡ ಧ್ವಜ ಯಾರ ಸ್ವತ್ತಲ್ಲ, ರಾಷ್ಟ್ರಧ್ವಜದ ಮೇಲೆ ನಮ್ಮ ನಾಯಕರ ಚಿತ್ರ ಹಾಕುತ್ತೇವೆ ಅಂದಮೇಲೆ ಕನ್ನಡ ಧ್ವಜದ ಮೇಲೂ ನಮ್ಮ ನಾಯಕರ ಚಿತ್ರ ಹಾಕುತ್ತೇವೆ. ಅದು ನಮ್ಮ ಮೂಲ ಹಕ್ಕು. ಅದಕ್ಕಾಗಿ ನಾವು ಕ್ಷಮೆ ಕೇಳುವುದಿಲ್ಲ” ಎಂದಿದ್ದಾರೆ.