ನ್ಯೂಸ್ ಆ್ಯರೋ : ಮಕ್ಕಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳ ಆಟ, ತುಂಟಾಟ, ನಗು, ತೊದಲು ನುಡಿಗಳು ಎಲ್ಲವೂ ನೋಡಲು ಚಂದ. ಕೆಲವೊಮ್ಮೆ ಮಕ್ಕಳ ತುಂಟತನ ಕೋಪ ತರಿಸಿದ್ರೆ, ಕೆಲವೊಮ್ಮೆ ನಗು ತರಿಸುತ್ತೆ. ಅದ್ರಲ್ಲೂ ಕೇಳಿದ್ದು ಕೊಡಿಸದಿದ್ದರೆ ಮಕ್ಕಳು ರಂಪ ಮಾಡಿ ಬಿಡುತ್ತಾರೆ. ಮಕ್ಕಳ ಚೇಷ್ಟೆಗಳು ಹೆಚ್ಚಾದಾಗ ಬುದ್ದಿ ಹೇಳಲು ಅಮ್ಮಂದಿರು ಏಟು ಕೊಡುವುದುಂಟು. ಆದ್ರೆ ಇಲ್ಲೊಬ್ಬ ಮೂರು ವರ್ಷದ ಪೋರ ಚಾಕಲೇಟ್ ಕೊಡಿಸದ ತಾಯಿ ವಿರುದ್ಧ ದೂರು ದಾಖಲಿಸಿದ್ದಾನೆ.
ಹೌದು.. ಮೂರು ವರ್ಷದ ಮಗು ಪೊಲೀಸರಿಗೆ ದೂರು ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ತನ್ನ ತಾಯಿ ಚಾಕಲೇಟ್ ಕೊಡಲಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದು, ಆಕೆಯನ್ನು ಜೈಲಿಗೆ ಹಾಕುವಂತೆ ಹೇಳಿದ್ದಾನೆ. ಈ ವಿಡಿಯೋ ಇದೀಗ ಇಂಟರ್‌ನೆಟ್ ಜಗತ್ತಿನ ಗಮನಸೆಳೆದಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಧ್ಯಪ್ರದೇಶದ ಬುರ್ಹಾನ್‌ಪುರದ ಹಮ್ಜಾ ಎಂಬ ಮಗು ತನ್ನ ಮಿಠಾಯಿಗಳು ಮತ್ತು ಚಾಕೊಲೇಟ್‌ಗಳನ್ನು ಕದಿಯುವ ತನ್ನ ತಾಯಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾನೆ. ನನ್ನ ತಾಯಿ ಚಾಕಲೇಟ್ ಕದಿಯುತ್ತಾಳೆ, ನನ್ನ ಕೆನ್ನೆಗೆ ಹೊಡೆಯುತ್ತಾಳೆ ಎಂದು ಹೇಳಿ ಕೆನ್ನೆ ತೋರಿಸುತ್ತಾನೆ. ಆಕೆಯನ್ನು ಜೈಲಿಗೆ ಹಾಕುವಂತೆ ಹೇಳುತ್ತಾನೆ.
ದೂರು ದಾಖಲಿಸುವಂತೆ ನಟಿಸುವ ಪೊಲೀಸ್ ತಾಯಿಯ ಹೆಸರೇನು ಕೇಳುತ್ತಾರೆ. ಆಗ ಬಾಲಕ ಮಮ್ಮಿ ಎಂದಷ್ಟೇ ಹೇಳುತ್ತಾನೆ. ಸದ್ಯಕ್ಕೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಮಗುವಿನ ಮುಗ್ಧತೆ, ಕ್ಯೂಟ್‌ನೆಸ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..